Tuesday 1 April 2014

GIST OF SHREEMADBHAGAVATGEETA

                                       ಶ್ರೀಮದ್ಭಗವದ್ಗೀತಾ ತಾತ್ಪರ್ಯ -- ಪ್ರಥಮೋಧ್ಯಾಯಃ |
೧೮ ಅಧ್ಯಾಯಗಳುಳ್ಳ ೭೦೦ ಶ್ಲೋಕಗಳನ್ನು ಒಳಗೊಂಡ ಶ್ರೀಮದ್ಭಗವದ್ಗೀತೆಯು  --  " ನನ್ನವರು ಮತ್ತು ಪಾಂಡವರು"  ಧರ್ಮ ಕ್ಷೇತ್ರವೆನಿಸಿದ ಈ ಕುರುಕ್ಶೇತ್ರದಲ್ಲಿ ಏನು ಮಾಡಿದರು ?- ಎಂಬ ದೃತರಾಷ್ಟ್ರ ನ ಪ್ರಶ್ನೆ ಗೆ ಸಂಜಯನ ಉತ್ತರದೊಂದಿಗೆ ಮೊದಲುಗೊಳ್ಳುತ್ತದೆ | ಸಂಜಯನು ಉತ್ತರಿಸುತ್ತಾ ಹೀಗನ್ನುತ್ತಾನೆ -- ೧. ದುರ್ಯೋಧನನು ಪಾಂಡವರ ೭ ಅಕ್ಷೋಹಿಣೀ ಸೇನೆಯ ಒಂದು ತುಣುಕಾದ "ಅನೀಕಿನೀ "  ಯನ್ನು ಅವಲೋಕಿಸುತ್ತಾ ತನ್ನ ಗುರು ಆಚಾರ್ಯ ದ್ರೋಣನೆಡೆಗೆ ಬಂದು ರಾಜ ದರ್ಪದಿಂದ ಕೂಡಿದ ಚೇಷ್ಟೆಯಿಂದ ಹೀಗೆಂದನು -- ಹೇ ಆಚಾರ್ಯ ನಿನ್ನ ಶಿಷ್ಯ . ದೃಷ್ಟದ್ಯುಮ್ನನಿಂದ ರಚಿಸಲ್ಪಟ್ಟ ವ್ಯೂಹವನ್ನು ಭೀಮನು ರಕ್ಷಿಸುತ್ತಿದ್ದಾನೆ | ಅಲ್ಲಿ ಅತ್ಯಂತ ಶ್ರೇಷ್ಟ ಬಿಲ್ಲುಗಾರರೂ ಯುದ್ಧದಲ್ಲಿ ಭೀಮಾರ್ಜುನರಿಗೆ ಸಮವಾದ ಅನೇಕ ಶೂರರೂ ಇದ್ದಾರೆ ಎನ್ನುತ್ತಾ ಯುಯುಧಾನ ವಿರಾಟರಿಂದ  ಮೊದಲು ಮಾಡಿ ೫ ಜನ ಪಾಂಡವ ಪುತ್ರರಾದ "ದ್ರೌಪದೇಯ" ರ ತನಕ ೧೮ ಹೆಸರುಗಳನ್ನು ಉಸುರಿದನು | ಆದರೂ ಶ್ರೀಕೃಷ್ಣ ನನ್ನೇ ಮರೆತುದು ಗಮನಾರ್ಹ | ಆ ಮೇಲೆ ಪಾಂಡವರ ಸೈನ್ಯವು ಸಂಖ್ಯೆಯಲ್ಲಿ ಮಿತವಾಗಿದ್ದರೂ - ಸಾಕಷ್ಟು  ಸಮರ್ಥವಾಗಿದೆ (ಪರ್ಯಾಪ್ತಂ) ಎಂಬ ರೀತಿಯಲ್ಲಿ ಹೇಳಿಕೊಂಡನು |
 ೨. ಹಾಗೆಯೇ ಭೀಷ್ಮ ನಿಂದ ರಕ್ಷಿಸಲ್ಪಟ್ಟ ತನ್ನ ಸೇನೆಯು ಸಾಕಷ್ಟಿದ್ದರೂ ಪೂರ್ಣ ಸಾಮರ್ತ್ಯದ  ನ್ಯೂನತೆಯೂ ಇದೆ (ಅಪರ್ಯಾಪ್ತಂ)  ಎಂಬಂತೆ ಗೊಣಗಿದನು | ಮುಂದೆ ಭೀಷ್ಮ ದ್ರೋಣಾದಿ ಗಳನ್ನೂ ಸೇರಿ  ೭ ಮಂದಿ ತನಗೆ ಪೂರ್ಣ ನಿಷ್ಟೆ ಯನ್ನು ತೋರಲು ಸಾಧ್ಯವಾಗದ ವಿವಶತೆಯನ್ನು ಹೊಂದಿದವರ ಹೆಸರುಗಳನ್ನು ಆಚಾರ್ಯರ ಮುಂದೆ ಅಣಕಿಸುವಂತೆ ಹೇಳಿಕೊಂಡನು  !- ಇದರೊಂದಿಗೆ ತನಗೆ ನಿಷ್ಟರಾಗಿ ತನಗಾಗಿ ಜೀವನವನ್ನೇ ತ್ಯಾಗ ಮಾಡಬಲ್ಲ ಬಹು ಮಂದಿ ಶೂರರೊ ಇದ್ದಾರೆ  ಎಂಬಂತೆ ಮಾತನಾಡಿದನು |
೩. ಆಗಲೇ ದುರ್ಯೋಧನನ ತಳಮಳ ವನ್ನು ಗಮನಿಸಿದ ಭೀಷ್ಮ ಪಿತಾಮಹರು ಸಿಂಹ ನಾದವನ್ನು ಮಾಡುತ್ತಾ ಯುದ್ಧದ ಪ್ರಾರಂಭಿಕ ಲಾಂಛನ ವೆಂಬಂತೆ  ಉಚ್ಛ ಸ್ವರದಲ್ಲಿ ಶಂಖ ನಾದವನ್ನು ಮಾಡಿದರು | ಒಡನೆಯೇ ಕೌರವ ಸೈನ್ಯವಿಡೀ ಅದೇ ಕ್ಷಣದಲ್ಲಿ -- ಶಂಖ, ಭೇರಿ, ಪಣವ, ಆನಕ -ಗೋಮುಖಾದಿ  ಸಕಲ  ವಾದ್ಯಗಳನ್ನೂ ದ್ವನಿ ಗೂಡಿಸಿ ಕರ್ಣ ಕಠೋರ ಭೀಷಣ ಧ್ವನಿ ಯ ಉತ್ಪತ್ತಿಗೆ ಕಾರಣವಾಯಿತು |
೪. ಅದಕ್ಕೆ ಪ್ರತಿಯಾಗಿ ಪಾಂಡವರಲ್ಲಿ - ಕ್ರಮಾಗತವಾಗಿ ಶಿಸ್ತು ಬದ್ಧ ವಾಗಿ ಶ್ರೀ ಕೃಷ್ಣನ ಪಾಂಚ ಜನ್ಯ ದಿಂದ ಆರಂಭವಾಗಿ ಎಲ್ಲ ಪಾಂಡವರೂ ಇತರ  ವೀರರೂ ಒಬ್ಬೊಬ್ಬರಾಗಿ  ಬೇರೆ ಬೇರೆಯಾಗಿ ತಮ್ಮ ತಮ್ಮ ಶಂಖಗಳ ಧ್ವನಿಗೂಡಿಸಿದರು - ಈ ದ್ವನಿಯು ಕೌರವರ ಎದೆ ಸೀಳುವಂತಿತ್ತು |  ಒಡನೆಯೇ ಅರ್ಜುನನು ತನ್ನ ರಥವನ್ನು ಎರಡು ಸೈನ್ಯಗಳ ಮಧ್ಯೆ ನಿಲ್ಲಿಸುವಂತೆ  ಶ್ರೀ ಕೃಷ್ಣ ನನ್ನು ಕೇಳಿದನು | ಶ್ರೀಕೃಷ್ಣನು ರಥವನ್ನು ಭೀಷ್ಮ ದ್ರೋಣ ರ ಸಮ್ಮುಖದಲ್ಲಿ ನಿಲ್ಲಿಸಿದನು |
  ೫. ಅಲ್ಲಿ ಪಿತಾಮಹ, ಆಚಾರ್ಯ, ಮಕ್ಕಳು, ಮೊಮ್ಮಕ್ಕಳು, ಮಿತ್ರರು ಹೀಗೆ ಎಲ್ಲಾ ತನ್ನವರನ್ನು ನೋಡಿ ಅರ್ಜುನನ ಮನ ಕದಡಿತು | ಮತ್ತು ಅವನು ಶ್ರೀ ಕೃಷ್ಣ ನೊಡನೆ ಇಂತೆಂದನು -- ಹೇ ಕೃಷ್ಣಾ ಈ ನನ್ನ ಬಾಂಧವರನ್ನು ನಾನು ಕೊಲ್ಲಲಾರೆ - ಈ ಗುರುಹಿರಿಯರನ್ನು ಕೊಂದು  ಪಡೆಯುವ ರಾಜ್ಯಕ್ಕಿಂತಲೂ ಭಿಕ್ಷಾನ್ನ ಜೀವನವೇ ಉತ್ತಮ ಎಂದು ನಾನು ತಿಳಿಯುವೆನು | ಹಾಗೆಯೇ ನಾನು ಶರೀರ ಸ್ಥಿಮಿತ ಕಳೆದುಕೊಳ್ಳುತ್ತಿದ್ದೇನೆ ನನ್ನ ಕೈಯಿಂದ ಗಾಂಢೀವವು ಜಾರುತ್ತಿದೆ ನನ್ನ ಚರ್ಮವೂ ಸುಡುತ್ತಿದೆ ಎಂದನು ಹಾಗೂ ಮೋಹಕ್ಕೊಳಗಾಗಿ ಚಡಪಡಿಸಿದನು |
೬. ಮುಂದೆ ಯುದ್ಧದಿಂದಾಗಬಹುದಾದ ಅನಾಹುತಗಳನ್ನು ಹೀಗೆಂದು ವಿವರಿಸಿದನು -- ಹೇ ಕೃಷ್ಣಾ - ಕುಲ ಕ್ಷಯ ಹಾಗೂ ಮಿತ್ರ ದ್ರೋಹ ಪಾತಕಗಳನ್ನು ನಾವು ನೋಡಲು ಶಕ್ತರಾಗಿದ್ದೇವೆ. --ಯಾಕೆ ನಾವು ಯುದ್ಧದಿಂದ ಹಿಂದೆಗೆಯಬಾರದು ? ಈ ದೋಷಗಳನ್ನು ಒಂದೊಂದಾಗಿ  ಹೀಗೆ ವಿವರಿಸಿದನು - ಕುಲಕ್ಷಯ  - ಇದರಿಂದ ಧರ್ಮ ನಾಶ - ಇದರಿಂದ ಅಧರ್ಮದ ಪ್ರಸರಣ - ಮುಂದೆ ಅಧರ್ಮ ಸ್ಫರ್ಶ ದಿಂದ ಕುಲ ಸ್ತ್ರೀಯರ ಪ್ರದೂಷಣ - ವರ್ಣ ಸಂಕರ - ಈ ವರ್ಣ ಸಂಕರವು ಕುಲ ನಾಶಕರಿಗೂ ಕುಲಕ್ಕೂ ನರಕ ಕಾರಕ - ಇದರಿಂದ ಇವರ ಪಿತೃಗಳೂ ಅಪರ ಕರ್ಮ ಮತ್ತು ಪಿಂಡಗಳಿಂದ ವಂಚಿತರಾಗಿ ಪಿತೃ ಲೋಕದಿಂದ ಕೆಳಕ್ಕೆ ಬೀಳುವರು | ಈ ಮೇಲಿನ ದೋಷಗಳಿಂದ ಕುಲನಾಶಕರ ಜಾತಿ ಧರ್ಮಗಳೂ -ಕುಲ ಧರ್ಮಗಳೂ ಶಾಶ್ವತವಾಗಿ ನಾಶ ಹೊಂದುವವು -- ಹೇ ಜನಾರ್ಧನಾ ಈ ರೀತಿ ಧರ್ಮ ನಾಶಕರಾದ ಮನುಷ್ಯರು ನಿಯತವಾಗಿ (ಶಾಶ್ವತಕ್ಕೆ ಸಮವಾಗಿ) ನರಕದಲ್ಲಿ ವಾಸಿಸ ಬೇಕಾಗುವುದು -- ಎಂದು ನಾವು ಕೇಳಿದ್ದೇವೆ  !!  -- ಆಹೋ -- ಈ ಮಹತ್ಪಾಪವನ್ನು ಮಾಡುವುದಕ್ಕೆ ನಾವು ಹೊರಟಿದ್ದೇವೆ - ಆಶಸ್ತ್ರ  ನಾದ ನನ್ನನ್ನು ಶಸ್ತ್ರ ಪಾಣಿಗಳಾದ ಇವರು ಕೊಂದರೂ ನನಗೆ ಕ್ಶೇಮಕರವೇ -- ಎಂದು ಹೇಳಿ - ಶರಗಳೊಂದಿಗೆ ಬಿಲ್ಲನ್ನೂ ತ್ಯಜಿಸಿ ರಥದ ಹಿಂಬಾಗದಲ್ಲಿ ಸುಮ್ಮನೆ ಕುಳಿತನು ||
ಆದರೆ ಆಚಾರ್ಯ ಶಂಕರರ ರ ಅಭಿಪ್ರಾಯದಂತೆ ಈ .ಜ್ಞಾನವು --  " ಶೋಕ ಮೊಹಾಭ್ಯಾಂ ಹಿ ಅಭಿಭೂತ ವಿವೇಕ ಜ್ಞಾನಃ "  - ಶೋಕ ಮೋಹಕ್ಕೊಳಗಾದ ರಾಗ ದ್ವೇಷಗಳಿಂದ ಕಲುಷಿತಗೊಂಡ ಚಿತ್ತ ದಿಂದ ಉದ್ಭವಿಸಿದ ಜ್ಞಾನ ವಾದುದರಿಂದ "ಮಿಥ್ಯಾ ಜ್ಞಾನ ವಾಗಿದೆ" -- ನಿಜ ಜ್ಞಾನವನ್ನು ಮುಂದೆ ಶ್ರೀ ಕೃಷ್ಣನೇ ಸ್ವತಃ ಹೇಳಲಿರುವನು ||  -- ಇತಿ ಪ್ರಥಮೋಧ್ಯಾಯಃ